ಪ್ರಿಮ್ಯೂಲ
	ಪ್ರಿಮ್ಯೂಲೇಸೀ ಕುಟುಂಬಕ್ಕೆ ಸೇರಿದ ಪ್ರಮುಖ ಅಲಂಕಾರ ಸಸ್ಯಜಾತಿ. ಪ್ರಿಮ್‍ರೋಸ್ ಸಾಮಾನ್ಯ ಹೆಸರು. ಇದರ ಪ್ರಭೇದಗಳು ಪ್ರಧಾನವಾಗಿ ಉತ್ತರ ಸಮಶೀತೋಷ್ಣ ಪ್ರದೇಶಗಳ ಸಸ್ಯಗಳು. ದಕ್ಷಿಣ ಅಮೆರಿಕದ ಉತ್ತರ ಭೂಭಾಗಗಳಲ್ಲಿ ಒಂದು ಪ್ರಭೇದ, ಜಾವದಲ್ಲಿ ಒಂದು ಪ್ರಭೇದ ಮತ್ತು ಆಫ್ರಿಕದಲ್ಲಿ ವಿರಳವಾಗಿ ಕೆಲವು ಪ್ರಭೇದಗಳು ಬೆಳೆಯುವುವು. ಪ್ರಿಮ್ಯೂಲದಲ್ಲಿ ಸುಮಾರು 300ಕ್ಕೂ ಹೆಚ್ಚು ಪ್ರಭೇದಗಳುಂಟು. ಇವುಗಳ ಪೈಕಿ ಸುಮಾರು ಅರ್ಧದಷ್ಟು ಚೀನದಲ್ಲೂ 70-72 ಪ್ರಭೇದಗಳು ಹಿಮಾಲಯ ವಲಯದಲ್ಲೂ ಉಳಿದವು ಜಪಾನ್, ಉತ್ತರ ಅಮೆರಿಕ, ಯೂರೋಪ್ ಹಾಗೂ ಯೂರೋಷ್ಯಗಳಲ್ಲೂ ಬೆಳೆಯುವುವು.

	ಎಲ್ಲ ಪ್ರಭೇದಗಳೂ ಬಲುಮಟ್ಟಿಗೆ ಕುಳ್ಳು ಗಾತ್ರದ ಬಹುವಾರ್ಷಿಕ ಮೂಲಿಕೆಗಳೂ ವಸಂತ ಕಾಲದಲ್ಲೇ ಹೆಚ್ಚಾಗಿ ಹೂ ಬಿಡುತ್ತವೆ. ಹೂಗಳು ಬಿಳಿ, ಕೆಂಪು, ಗುಲಾಬಿ, ಬಣ್ಣದವಾಗಿದ್ದು ತುಂಬ ಆಕರ್ಷಕ ಹೂಗೊಂಚಲುಗಳಲ್ಲಿ ಅರಳುತ್ತವೆ. ಇದರಿಂದಾಗಿ ಪ್ರಿಮೂಲ್ಯದ ಪ್ರಭೇದಗಳಿಗೆ ಅಪಾರ ಬೇಡಿಕೆಯಿದೆ. ಹೂಗಳ ಬಣ್ಣ ಕೆಲವೊಮ್ಮೆ ನೀಲಿ, ಹಳದಿ ಇರುವುದೂ ಉಂಟು. ಕಾಂಡ ಭೂಗತ ಮಾದರಿಯದು. ಎಲೆಗಳು ಸರಳ ರೀತಿಯವು ಇಲ್ಲವೆ ಹಾಲೆಗಳುಳ್ಳಂಥವು. ನೆಲದ ಮಟ್ಟದಿಂದ ಮೇಲಕ್ಕೆ ಚಕ್ರಾಕಾರವಾಗಿ ಜೋಡಣೆ ಗೊಂಡಿರುವುವು.
(ಜಿ.ಬಿ.;ಡಿಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ